ಶನಿವಾರ, ನವೆಂಬರ್ 5, 2016

ಅನ್ನಧಾತೋ ಸುಖೀಭವ|||

ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ, ಎಂಬ ಗಾದೆ ಕೇಳಿರುತ್ತಿರಿ ಹಾಗೆಯೇ ಅತಿಯಾದರೆ ಅಮೃತವು ವಿಷ ಎಂಬ ಗಾದೆ ಕೂಡ ಕೇಳಿರುತ್ತಿರಿ. ಆದ್ದರಿಂದ ನಮ್ಮ ಹೊಟ್ಟೆ ತುಂಬುವಷ್ಟು ಊಟ ಮಾಡಿ ಉಳಿದಿದ್ದರೆ ಹಾಳು ಮಾಡದೆ ಯಾರದರು ಹತ್ತಿರದಲ್ಲಿ ಬಡವರಿದ್ದರೆ ಅವರಿಗೆ ದಾನ ಮಾಡಿ ಪುಣ್ಯ ಸಂಪಾದನೆ ಮಾಡಬಹುದು. "ಎಲ್ಲಾ ರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ" ಎಂದು ದಾಸರು ಹೇಳಿದ್ದಾರೆ. ಮನುಷ್ಯನಿಗೆ ಅನಿವಾರ್ಯ ಮತ್ತು ಅಗತ್ಯ ವಾಗಿರುವುದು ಆಹಾರ ಮತ್ತು ಬಟ್ಟೆ. ಇದಕ್ಕಾಗಿಯೇ ಮನುಷ್ಯರಾದ ನಾವು ಕೆಲಸ ಮಾಡಿ ಹಣ ಸಂಪಾದನೆ ಮಾಡುತ್ತಿರುವುದು.
"ತುತ್ತು ಅನ್ನ ತಿನ್ನೋಕೆ... ಬೊಗಸೆ ನೀರು ಕುಡಿಯೋಕೆ... ತುಂಡು ಬಟ್ಟೆ ಸಾಕು ನನ್ನ ಮಾನ  ಮುಚ್ಚೋಕೆ.. ಅಂಗೈಯಗಲ ಜಾಗ ಸಾಕು ಹಾಯಾಗಿರೋಕೆ..!!" ಹೀಗೆ ಹಾಡಿದವರು ನಮ್ಮ ಸಾಹಸ ಸಿಂಹ ವಿಷ್ಣುವರ್ಧನ್. ಮೊನ್ನೆ ಗ್ರಾಫಿಕ್ಸ್ ನಲ್ಲಿ ವಿಷ್ಣು ಅಭಿನಯಿಸಿದ ನಾಗರಹಾವು ಚಿತ್ರ ಬಿಡುಗಡೆಯಾಯಿತು. ಬಿಡುಗಡೆ ದಿನ ಬೆಂಗಳೂರಿನ ಭೂಮಿಕ ಥಿಯೇಟರ್ ಬಳಿ ವಿಷ್ಣು ಅಭಿಮಾನಿಗಳು ಅನ್ನದಾನ ಹಮ್ಮಿಕೊಂಡಿದ್ದರು. ಒಬ್ಬ ಮೇರುನಟ, ಕರ್ನಾಟಕ ಚಲನಚಿತ್ರಗಳ ದಂತಕಥೆ, ನಮ್ಮ ವಿಷ್ಣುವರ್ಧನ್ ಅವರ ಹೆಸರಿನಲ್ಲಿ ಅನ್ನದಾನ ಮಾಡಿದ ಅಭಿಮಾನಿಗಳಿಗೆ ನಿಜಕ್ಕೂ ಒಂದು ಸೆಲ್ಯೂಟ್.
ಮನುಷ್ಯ ತಿನ್ನುವುದಕ್ಕಾಗಿ ಬದುಕಬಾರದು, ಆದರೆ ಬದುಕುವುದಕ್ಕಾಗಿ ತಿನ್ನಬೇಕು.

ಭಾರತೀಯ ಸಂಸ್ಕೃತಿಯಲ್ಲಿ ಅನ್ನದಾನಕ್ಕೆ ಬಹಳ ಮಹತ್ವವಿದೆ. ಶ್ರೀ ಸತ್ಯನಾರಾಯಣ ಸ್ವಾಮಿ ವ್ರತ ಕಥೆಯಲ್ಲಿ ಅನ್ನದಾನ ಮಾಡಬೇಕೆಂಬ ಉಲ್ಲೇಖವಿದೆ. ಯಾವುದೇ ಶುಭಕಾರ್ಯಕ್ರಮಗಳಲ್ಲಿ ಅನ್ನದಾನಕ್ಕೆ ಪ್ರಾಶಸ್ತ್ಯ ನೀಡುತ್ತೆವೆ.
ಅನ್ನದಾನಕ್ಕೂ ಧಾರ್ಮಿಕ ಕ್ಷೇತ್ರಗಳಿಗೂ ಒಂದು ಬಿಡಿಸಲಾಗದ ಸಂಬಂಧವಿದೆ. ಹಸಿದಾಗ ಲೋಕವೆ ಕಾಣುವುದಿಲ್ಲ ಇನ್ನು ದೇವರು ಕಾಣುತ್ತಾನೆಯೇ. ಆದ್ದರಿಂದಲೇ ದೇವಸ್ಥಾನಗಳಲ್ಲಿ ಅನ್ನದಾನವನ್ನು ಏರ್ಪಡಿಸಿರಬಹುದು.
ಅನ್ನಪೂರ್ಣೆ ಸದಾ ಪೂರ್ಣೆ|
ಶಂಕರೇ ಪ್ರಾಣವಲ್ಲಭೆ||
ಜ್ಞಾನ ವೈರಾಗ್ಯ ಸಿದ್ಯಾಥಂ|
ಭಿಕ್ಷಂ ದೇಹಿಚ ಪಾರ್ವತಿ||
ಈ ಸಂಸ್ಕೃತ ಶ್ಲೋಕ ಸಾಮಾನ್ಯವಾಗಿ ಅನ್ನದಾನ ನಡೆಯುವ ಎಲ್ಲಾ ಕ್ಷೇತ್ರಗಳಲ್ಲಿ ಬರೆದಿರುತ್ತಾರೆ. ಕರ್ನಾಟಕದ  ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಅನ್ನ ಸಂತರ್ಪಣೆ ನಡೆಯುತ್ತಿಲಿದೆ. ಹೊರನಾಡು ಶ್ರೀ ಅನ್ನಪೂರ್ಣೆಶ್ವರಿ ಕ್ಷೇತ್ರ ಅನ್ನದಾನಕ್ಕೆ ಪ್ರಸಿದ್ಧಿ ಹೊಂದಿದೆ, ಇಲ್ಲಿ ಪ್ರತಿನಿತ್ಯ ಸಾವಿರಾರು ಭಕ್ತರು ಅನ್ನದಾನದಲ್ಲಿ ಪಾಲ್ಗೊಳ್ಳುತ್ತಾರೆ. ನನಗೆ ಈ ಕ್ಷೇತ್ರದಲ್ಲಿ ಊಟ ಮಾಡಿದಾಗ ಅಮೃತವನ್ನೇ ಸೇವಿಸಿದನೇನೋ ಎಂಬ ಭಾವ ಬಂದಿತ್ತು. ಇಲ್ಲಿಯ ಊಟದ ರುಚಿಯನ್ನು ಯಾವ ಪದಗಳಲ್ಲಿ ಹೇಳಲು ಅಸಾಧ್ಯ. ಇದಕ್ಕೆಲ್ಲ ತಾಯಿ ಅನ್ನಪೂರ್ಣೇಶ್ವರಿಯ ಕೃಪೆಯೇ ಕಾರಣ ಎಂದರೆ ತಪ್ಪಾಗಲಾರದು.
ಹೆಸರಲ್ಲೇ  ಧರ್ಮ ಇರುವುದು ಶ್ರೀ ಕ್ಷೇತ್ರ ಧರ್ಮಸ್ಥಳ,  ಇಲ್ಲಿ ಊಟ ಮಾಡಲು ಶ್ರೀ ಮಂಜುನಾಥ ಸ್ವಾಮಿಯ ಕೃಪೆವೊಂದಿದ್ದರೆ ಸಾಕು. ಶ್ರೀ ಕ್ಷೇತ್ರದಲ್ಲಿ ಸರಿ ಸುಮಾರು 50 ಸಾವಿರ ಮಂದಿ  ಪ್ರತಿ ದಿನ ಊಟ ಮಾಡುತ್ತಾರೆ. ಭಾರತದ ಬೃಹತ್ ಅಡುಗೆ ಕೋಣೆಗಳ ಪಟ್ಟಿಯಲ್ಲಿ ಧರ್ಮಸ್ಥಳದ ಅಡುಗೆಕೋಣೆ ಕೂಡ ಸೇರ್ಪಡೆಗೋಂಡಿದೆ. ಇನ್ನೊಂದು ಕುತೂಹಲಕಾರಿ ವಿಷಯವೇನೆಂದರೆ ಇಲ್ಲಿ ಅಡುಗೆ ಮಾಡಲು ಜೈವಿಕ ಇಂಧನವನ್ನು ಬಳಸುತ್ತಾರೆ. ನ್ಯಾಷನಲ್ ಜಿಯೋಗ್ರಾಫಿಕ್ ಛಾನಲ್ ನಲ್ಲಿ ಜೂನ್ 22 ರಂದು "ಮೆಗಾ ಕಿಚನ್" ಎಂಬ ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಅಡುಗೆಕೋಣೆ ತೋರಿಸಿದ್ದು ಬಹಳ ಸಂತಸದ ವಿಚಾರ.
ದಕ್ಷಿಣ ಕನ್ನಡ ಜಿಲ್ಲೆ ಧಾರ್ಮಿಕ ಕ್ಷೇತ್ರಗಳಿಗೆ ಹೆಸರುವಾಸಿ. ಕಟೀಲು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ಸರಾಸರಿ ಐದು ಸಾವಿರದಿಂದ ಹತ್ತು ಸಾವಿರ ಮಂದಿಗೆ ಅನ್ನದಾಸೋಹ ನಡೆಸಲಾಗುತ್ತಿದೆ. ಶ್ರೀ ಕ್ಷೇತ್ರದಲ್ಲಿ ತಯಾರಿಸುವ ಹಾಲಿನ ಪರಮಾನ್ನದ (ಪಾಯಸ) ರುಚಿ ಬಾಯಲ್ಲಿ ನೀರೂರಿಸುತ್ತದೆ. ಈ ಕ್ಷೇತ್ರದಲ್ಲಿ ಭಕ್ತಾದಿಗಳಿಗಲ್ಲದೆ 3500 ಶಾಲ ಮಕ್ಕಳಿಗೆ ಅನ್ನ ಸಂತರ್ಪಣೆ ನಡೆಯುತ್ತಿದೆ. ಇನ್ನೊಂದು ವಿಶೇಷ ಏನೆಂದರೆ ಕೈಸ್ತ ಸಂಸ್ಥೆಗಳು ನಡೆಸುತ್ತಿರುವ ವಿಶೇಷ ಶಾಲೆಗಳ ಮಕ್ಕಳಿಗೂ ಅನ್ನದಾನ ಮಾಡುತ್ತಿರುವುದು ಸಾಮರಸ್ಯದ ವಿಷಯವಾಗಿದೆ. ವಾರ್ಷಿಕವಾಗಿ 2 ರಿಂದ 3 ಕೋಟಿ ಅನ್ನದಾನಕ್ಕಾಗಿ ಶ್ರೀ ಕ್ಷೇತ್ರ ವೆಚ್ಚ ಮಾಡುತ್ತಿದೆ. ಇಲ್ಲಿ ಅನ್ನದಾನ ಮಾಡಲು ಇಚ್ಛಿಸುವ ಭಕ್ತರಿಗೆ 80ಜಿ ವಿನಾಯಿತಿ ಇರುತ್ತದೆ.
ಉಳಿದಂತೆ ಉಡುಪಿ ಶ್ರೀಕೃಷ್ಣ ಮಠ, ಕುಕ್ಕೆ ಶ್ರೀ ಸುಬ್ರಮಣ್ಯ ದೇವಸ್ಥಾನ, ಕೊಲ್ಲೂರು ಮೂಕಾಂಬಿಕಾ ಕ್ಷೇತ್ರ, ಶೃಂಗೇರಿ ಶಾರದಾ ಪೀಠ, ಮುಂತಾದ ಎಲ್ಲಾ ಧಾರ್ಮಿಕ ಕ್ಷೇತ್ರಗಳಲ್ಲಿ ಅನ್ನ ದಾಸೋಹ ನಡೆಯುತ್ತಲಿದೆ.
ಕೊಡಗಿನ ಭಾಗಮಂಡಲದ ತಲಕಾವೇರಿ ಕ್ಷೇತ್ರ, ಪಾಡಿ ಇಗ್ಗುತಪ್ಪ ಕ್ಷೇತ್ರ ಮತ್ತು ಬಾಡಗರಕೇರಿ ಶ್ರೀ ಮೃತ್ಯುಂಜಯ ಕ್ಷೇತ್ರದಲ್ಲಿ ದಿನಂಪ್ರತಿ ಅನ್ನ ಸಂತರ್ಪಣೆ ನಡೆಯುತ್ತಿದೆ. ಗೋಣಿಕೊಪ್ಪದ ಶ್ರೀ ಉಮಾಮಹೇಶ್ವರಿ ದೇವಸ್ಥಾನಲ್ಲಿ ಸುಬ್ರಮಣ್ಯ ಷಷ್ಠಿ, ಯುಗಾದಿ, ಶಿವರಾತ್ರಿ, ಗಣೇಶ ಚತುರ್ಥಿ, ದಸರಾ ಮುಂತಾದ ವಿಶೇಷ ದಿನಗಳಲ್ಲಿ ಮತ್ತು ಪ್ರತಿ ತಿಂಗಳ ಹುಣ್ಣಿಮೆಯಂದು ನಡೆಯುವ ಸಾಮೂಹಿಕ ಸತ್ಯನಾರಾಯಣ ಪೂಜೆಯ ಸಂದರ್ಭಲ್ಲಿ ಅನ್ನ ದಾನ ನಡೆಸುತ್ತಾರೆ.
ನಮ್ಮ ದೇಶದ ಬೆನ್ನೆಲುಬು ಎಂದು ಕರೆಸುಕೊಳ್ಳುವ ರೈತರನ್ನು ನಾವು ಅನ್ನದಾತ ಎಂದು ಕರೆಯುತ್ತೇವೆ. ಆದರೆ ಆ ಅನ್ನದಾತ ಬರಗಾಲ ಎಂಬಿತ್ಯಾದಿ ಸಂಕಷ್ಟಗಳಿಗೆ ತುತ್ತಾಗುತ್ತಿದ್ದಾನೆ. ಸರ್ಕಾರ ರೈತರ ಬಗೆಗಿನ ವಿಚಾರವನ್ನು ಹಗುರವಾಗಿಯೇ ತೆಗೆದುಕೊಳ್ಳುತ್ತಿದೆ. ರಾಜಕೀಯ ಸಮಾವೇಶಗಳಲ್ಲಿ ಭಕ್ಷ್ಯ ಬೋಜನಗಳನ್ನು ಚೆಲ್ಲಾಡುತ್ತಾರೆ. ಮೊನ್ನೆ ಮೈಸೂರು ದಸರಾ ಕಾರ್ಯಕ್ರಮ ವೀಕ್ಷಿಸಲು ಬಂದಿದ್ದ ವಿಐಪಿಗಳು ಅಲ್ಲಿ ಚೆಲ್ಲಾಡಿದ ಭಕ್ಷ್ಯಗಳನ್ನು ನೋಡಿದಾಗ ಇವರೆನೆಲ್ಲ ವಿಐಪಿಗಳು ಎಂದು ಕರೆದವರು ಯಾರು ಎಂದನಿಸುತ್ತದೆ.
ನಮ್ಮ ದೇಶದಲ್ಲಿ ಒಬ್ಬ ಬಡವ ಊಟ ಮಾಡುವುದಕ್ಕು ಮತ್ತು ಒಬ್ಬ ಶ್ರೀಮಂತ ಊಟ ಮಾಡುವುದಕ್ಕು ವ್ಯತ್ಯಾಸ ಇರುವುದು ದುರದೃಷ್ಟ. ಶ್ರೀಮಂತನ ಊಟದ ತಟ್ಟೆಯಲ್ಲಿ ಯಾವಗಲು ಅನ್ನ ವ್ಯರ್ಥವಾಗುತ್ತದೆ. ಶ್ರೀಮಂತರ ಆಡಂಬರದ ಭೋಜನ ಕೂಟಗಳಲ್ಲಿ ಬಿಸಾಡುವ ಅನ್ನದ ಪ್ರಮಾಣಗಳಲ್ಲಿ ಬಡವರು ಹಲವಾರು ದಿನಗಳು  ಊಟ ಮಾಡಬಹುದು.
ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ತಮ್ಮ ಹೆಸರು ಹೇಳದೆ ಅನ್ನದಾನ ಮಾಡುತ್ತಿರುವವರು ನಮ್ಮ ನಡುವೆ ಇದ್ದಾರೆ. ಹಲವು ಸಂಘ ಸಂಸ್ಥೆಗಳು, ಟ್ರಸ್ಟ್ ಗಳು, ವಿಶೇಷ ಮಕ್ಕಳ ಶಾಲೆಗಳ ಆಡಳಿತ ಮಂಡಳಿಯವರು ತಮ್ಮ ಜೀವನ್ನೆ ಸಮಾಜದ ಏಳಿಗೆಗಾಗಿ ಮುಡುಪಾಗಿಟ್ಟಿದ್ದಾರೆ. ಇಂತಹ ಸಮಾಜ ಸೇವಕರು ನಮ್ಮ ದೇಶದ ಅಮೂಲ್ಯ ರತ್ನಗಳು. ಇಂತಹ ರತ್ನಗಳಿಗೆ ನಮ್ಮ ಕೈಲಾದಷ್ಟು ಸಹಾಯ ಮಾಡುವುದು ಒಳ್ಳೆಯದು ಎಂಬುವುದು ನನ್ನ ಉದ್ದೇಶ.

2 ಕಾಮೆಂಟ್‌ಗಳು: