ಬುಧವಾರ, ಸೆಪ್ಟೆಂಬರ್ 28, 2016

ಎಚ್ಚರ ಇದು ಅಪಘಾತ ವಲಯ



   ರಾಮ ಅವನ ತಂದೆ ತಾಯಿಗೆ ಒಬ್ಬನೆ ಮಗ, ಅವನ ತಂದೆ ಕಾಫಿ ಎಸ್ಟೇಟಿನ ಮಾಲೀಕರು. 10ನೇ ತರಗತಿ ಆದ ನಂತರ ಪದವಿಪೂರ್ವ ಶಿಕ್ಷಣಕ್ಕೆ ತಮ್ಮ ಊರಿನಿಂದ ಸುಮಾರು 30ಕಿ.ಮೀ ದೂರದಲ್ಲಿರುವ ಪಟ್ಟಣಕ್ಕೆ ರಾಮನನ್ನು ಕಳುಹಿಸಿದರು. ರಾಮ ಪ್ರಥಮ ಪಿಯುಸಿಯಲ್ಲಿ ಅನುತ್ತೀರ್ಣನಾದ. ಇದಾದ ನಂತರ ತಂದೆ ತಾಯಿಯನ್ನು ಒಪ್ಪಿಸಿ ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿಗೆ ಪುನಃ ಪ್ರಥಮ ಪಿಯುಸಿಗೆ ಪ್ರವೇಶ ಪಡೆದ. ಅಲ್ಲಿ ಓಡಾಡಲು ಬೈಕ್ ಬೇಕೆಂದು ಸುಮಾರು 1.8ಲಕ್ಷ ಮೌಲ್ಯದ ಬೈಕನ್ನು ತೆಗೆಸಿಕೊಂಡ. ಕಾಲೇಜಿಗೆ ಸೇರಿದ ಕೆಲವು ತಿಂಗಳುಗಳ ನಂತರ ಬೈಕ್ ಓಡಿಸುತ್ತಿದ್ದಾಗ ನಿಯಂತ್ರಣ ಕಳೆದುಕೊಂಡು ರಸ್ತೆ ವಿಭಾಜಕಕ್ಕೆ ಡಿಕ್ಕಿ ಹೊಡೆದು ಸ್ಥಳದಲ್ಲೇ ತೀರಿಕೊಂಡ.
   ಇದು ಕೇವಲ ರಾಮನ ವಿಷಯವಲ್ಲ, ಈಗಿನ ಯುವಜನತೆ ಅದರಲ್ಲೂ ವಿದ್ಯಾರ್ಥಿಗಳು ತಂದೆ ತಾಯಿಯರನ್ನು ಪೀಡಿಸಿ ಬೈಕ್ ತೆಗೆಸಿಕೊಂಡು ತಮ್ಮ ಪ್ರಾಣಕ್ಕೆ ಕುತ್ತು ತಂದುಕೊಳ್ಳುತಿದ್ದಾರೆ. ವೇಗದಲ್ಲಿ ಬೈಕ್ ಚಲಾಯಿಸಿದರೆ ಏನೋ ಸಾಹಸ ಮಾಡಿದ್ದೇನೆ ಎಂಬ ಅಹಂಕಾರ. ತನ್ನ ವಿರುದ್ಧ ದಿಕ್ಕಿನಿಂದ ವಾಹನ ಬರುತ್ತಿದ್ದರೂ ವೇಗವನ್ನು ಕಡಿಮೆ ಮಾಡಲಾರೆ ಎಂಬ ಗರ್ವ. ದಿನಂಪ್ರತಿ ಸುದ್ದಿವಾಹಿನಿ ಮತ್ತು ದಿನ ಪತ್ರಿಕೆಗಳಲ್ಲಿ ದ್ವಿಚಕ್ರ ವಾಹನಗಳ ಅಪಘಾತಗಳ ಸುದ್ದಿ ಸಾಮಾನ್ಯವಾಗಿದೆ. "ಅವಸರವೆ ಅಪಘಾತಕ್ಕೆ ಕಾರಣ", ಎಂಬ ಘೋಷ ವಾಕ್ಯ ಎಲ್ಲಾ ಹೆದ್ದಾರಿಗಳಲ್ಲಿ ಬರೆದಿದ್ದರು ಅಪಘಾತಗಳು ಕಡಿಮೆಯಾಗುತ್ತಿಲ್ಲ. "ಅಪಘಾತ ವಲಯ" ಎಂಬ ಎಚ್ಚರಿಕೆ ಫಲಕಗಳು ಕೂಡ ಕೆಲಸ ಮಾಡುತ್ತಿಲ್ಲ.
ವೇಗವನ್ನು ನಿಯಂತ್ರಿಸಲು ಹೆದ್ದಾರಿಗಳಲ್ಲಿ ರಸ್ತೆ ಉಬ್ಬುಗಳನ್ನು ನಿರ್ಮಿಸಿದ್ದಾರೆ. ಈಗ ಬೈಕಿನ ಹಿಂಬದಿ ಸವಾರ ಕೂಡ ಹೆಲ್ಮೆಟ್ ಧರಿಸಬೇಕೆಂಬ ಕಾನೂನು ಜಾರಿಗೊಳಿಸಿದ್ದಾರೆ. ಇಷ್ಟೆಲ್ಲ ಸುರಕ್ಷಿತ ಕ್ರಮಗಳು ಜಾರಿಯಲ್ಲಿದ್ದರು ಅಪಘಾತಗಳು ನಿಲ್ಲುತ್ತಿಲ್ಲ.
    ಅಪಘಾತಗಳಲ್ಲಿ ಸಾವು ನೋವುಗಳು ಸಂಭವಿಸಲು ಪ್ರಮುಖ ಕಾರಣಗಳೇನೆಂದು ನೋಡುವುದಾದರೆ:-
1)ಅತಿ ಹೆಚ್ಚು ವೇಗದಲ್ಲಿ ಚಲಾಯಿಸುವುದು.
2)ಭಾರವಾದ ಟ್ರಕ್ ಗಳು.
3)ಕುಡಿದು, ಪಾನಮತ್ತರಾಗಿ ವಾಹನ ಚಲಾಯಿಸುವುದು.
4)ಹೆಲ್ಮೆಟ್ ಮತ್ತು ಸೀಟ್ ಬೆಲ್ಟ್ ಧರಿಸದೆ ವಾಹನ ಚಲಾಯಿಸುವುದು.
5)ವಾಹನ ಚಲಾಯಿಸುವಾಗ ಮೊಬೈಲ್ ನಲ್ಲಿ ಮಾತನಾಡುವುದು.
   ಅಘಾತಕಾರಿ ವಿಷಯವೇನೆಂದರೆ ಭಾರತದ ಪ್ರಮುಖ ಹತ್ತು ನಗರಗಳಲ್ಲಿ ಬೆಂಗಳೂರು ವಾಹನ ಅಪಘಾತಗಳ ಸಂಖ್ಯೆಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.
2014ರ ಸಮೀಕ್ಷೆಯ ಪ್ರಕಾರ ಬೆಂಗಳೂರಿನಲ್ಲಿ ಸಂಭವಿಸಿದ ಅಪಘಾತಗಳಲ್ಲಿ ಸರಿ ಸುಮಾರು10,444 ಮಂದಿ ಸಾವನ್ನಪ್ಪಿದ್ದಾರೆ. ಕರ್ನಾಟಕ ರಾಜ್ಯದಲ್ಲಿ 43,694 ಅಪಘಾತಳು ವರದಿಯಾಗಿವೆ.
ಭಾರತ ದೇಶದಲ್ಲಿ ಪ್ರತಿ ಗಂಟೆಗೆ 16 ಅಪಘಾತಗಳು ಸಂಭವಿಸುತ್ತಿದೆ. 53 ಬೃಹತ್ ನಗರಗಳಲ್ಲಿ ದೇಶದ ರಾಜಧಾನಿ ದೆಹಲಿ ಮೊದಲನೇ ಸ್ಥಾನದಲ್ಲಿದೆ.
ಭಾರತದಲ್ಲಿ ಆರ್ಥಿಕ ಮತ್ತು ಜನಸಂಖ್ಯೆಗಳಿಗಿಂತ ವಾಹನಗಳ ಸಂಖ್ಯೆ ಏರುತ್ತಿದೆ. ಪ್ರತಿ ಮನೆಯಲ್ಲಿ ಕನಿಷ್ಠ 2 ರಿಂದ 4 ವಾಹನಗಳು ಇದ್ದೇ ಇದೆ.
ವಿಶ್ವ ಆರೋಗ್ಯ ಸಂಸ್ಥೆಯ (WHO) ಪ್ರಕಾರ ಭಾರತದಲ್ಲಿ ಸಾವನ್ನಪ್ಪಲು ಅಥವಾ ಅಂಗವಿಕಲತೆಗೆ ರಸ್ತೆ ಅಪಘಾತಗಳು ಕಾರಣವಾಗುತ್ತಿದೆ. ಮುಖ್ಯವಾಗಿ ಯುವಕರು ಮತ್ತು ಮಧ್ಯ ವಯಸ್ಕರು ಅಪಘಾತಗಳಿಂದಾಗಿ ಪ್ರಾಣ ಕಳೆದುಕೊಳ್ಳುತಿದ್ದಾರೆ.
    ಇದನ್ನೆಲ್ಲ ನೋಡಿದಾಗ ತುಂಬಾ ಬೇಸರವಾಗುತ್ತದೆ, ಇನ್ನಾದರೂ ಅಪಘಾತಗಳು ಕಡಿಮೆಯಾಗುತ್ತದೆ ಎಂಬುವುದು ಕನಸಿನ ಮಾತು!!!
Source: Road accidents in India 2014

ಮಂಗಳವಾರ, ಸೆಪ್ಟೆಂಬರ್ 27, 2016

ಇರ್ಪು ಎಂಬ ಸುಂದರ ಜಲಪಾತ

 
ಕಳೆದ ಭಾನುವಾರ ನನ್ನ ಅಕ್ಕ ಮನೆಗೆ ಬಂದಿರುವಾಗ ಎಲ್ಲಿಗಾದರು ಪ್ರವಾಸ ಹೋಗೋಣ ಎಂದಾಗ ನನಗೆ ತಕ್ಷಣ ಎಲ್ಲಿಗೆ ಹೋಗೋಣ ಎಂದು ತಿಳಿಯಲಿಲ್ಲ, ಇರ್ಪು ರಾಮೇಶ್ವರ ದೇವಸ್ಥಾನಕ್ಕೆ ಹೋಗಿದ್ದ ನಾನು ಇದುವರೆಗೂ ಇರ್ಪು ಜಲಪಾತವನ್ನು ಕಂಡಿರಲಿಲ್ಲ.
ನಾನು ನನ್ನ ಸ್ನೇಹಿತ  ದೀಕ್ಷಿತ್ ನಿಗೆ ನಾಳೆ ಇರ್ಪು ಜಲಪಾತಕ್ಕೆ ಹೋಗೋಣವೆ ಎಂದು ವಾಟ್ಸೇಪ್ ಮಾಡಿದೆ, ಅವನು ಹೋಗೋಣ ಹಾಗೆಯೇ ಟಿ-ಶೆಟ್ಟಿಗೇರಿ  ಬಳಿ ಇರುವ  ಟಿ-ಎಸ್ಟೇಟಿಗು ಹೋಗಿ ಬರೋಣ ಎಂದ. ಹೀಗೆ ಒಂದೇ ದಿನದಲ್ಲಿ ತಕ್ಷಣದಲ್ಲಿ, ಯಾವುದೇ ತಯಾರಿಯಿಲ್ಲದೆ ಒಂದು ಸ್ಥಳಕ್ಕೆ ಹೋಗೋಣ ಎಂದು ನಿರ್ಧರಿಸಿದ್ದು.
   ನಾನು ನನ್ನ ಅಕ್ಕ ಒಂದು ಬೈಕಿನಲ್ಲಿ  ದೀಕ್ಷಿತ್ ಮತ್ತು ಅವನ ಅಕ್ಕ ಇನ್ನೊಂದು  ಬೈಕಿನಲ್ಲಿ ದೀಕ್ಷಿತ್ ನ ಇನ್ನು 6 ಮಂದಿ ಗೆಳೆಯರು ಇನ್ನೆರಡು ಬೈಕಿನಲ್ಲಿ ಹೀಗೆ ಒಟ್ಟು 10 ಮಂದಿ ಇರ್ಪು ಜಲಪಾತವನ್ನು ನೋಡಲು ಗೋಣಿಕೊಪ್ಪದಿಂದ ಪ್ರಯಾಣ ಬೆಳೆಸಿದೆವು.
ಗೋಣಿಕೊಪ್ಪ-ಕುಟ್ಟ ಹೆದ್ದಾರಿಯಲ್ಲಿ, ಶ್ರೀಮಂಗಲ ಮಾರ್ಗವಾಗಿ ಇರ್ಪುವಿಗೆ ತಲುಪಿದೆವು. ಇರ್ಪು ಜಲಪಾತವನ್ನು ವೀಕ್ಷಿಸಲು 50 ರೂಪಾಯಿ ಪ್ರವೇಶದರದ ಜೊತೆಗೆ ವಾಹನ ನಿಲುಗಡೆಗೆ ಪ್ರತಿ ದ್ವಿಚಕ್ರಗಳಿಗೆ 5 ರೂಪಾಯಿಯಂತೆ ತೆತ್ತು ಜಲಪಾತ ವೀಕ್ಷಣೆ ದ್ವಾರವನ್ನು ಪ್ರವೇಶಿಸಿದೆವು. ನನ್ನ ಪ್ರಕಾರ ಕೊಡಗಿನ ಯಾವುದೇ ಪ್ರವಾಸಿ ತಾಣಗಳಲ್ಲಿ ಇಷ್ಟು ದುಬಾರಿ ಪ್ರವೇಶ ಶುಲ್ಕ ಇರಲಾರದು. 50 ರೂಪಾಯಿ ತೆತ್ತು ಜಲಪಾತದ ಪ್ರಕೃತಿ ಸೌಂದರ್ಯವನ್ನು ನೋಡುವಂತಹ ಪರಿಸ್ಥಿತಿ ನಮ್ಮದು. ನಾನು ಪ್ರವೇಶ ದರ ಇರಲೇಬಾರದು ಎಂದು ಹೇಳುತ್ತಿಲ್ಲ, ಕನಿಷ್ಠ ಪಕ್ಷ ಅದು ಸಾಮಾನ್ಯ ಮನುಷ್ಯನಿಂದ ಕೊಡುವಷ್ಟು ಇದ್ದರೆ ಸಾಕಿತ್ತು. ನಿರ್ವಹಣೆ, ಸ್ವಚ್ಚತೆ ಎಂಬಿತ್ಯಾದಿ ಖರ್ಚುಗಳಿಗೆ ಸರಿ ಹೊಂದಿಸಿ ಬರುವ ಪ್ರವಾಸಿಗರಿಗೆ ಕೊಡಬಹುದು ಎಂದನಿಸುವ ಮೊತ್ತ ಆಗಿದ್ದರೆ ಚೆನ್ನಾಗಿತ್ತು.
   ಜಲಪಾತಕ್ಕೆ ಹೋಗುವವರು ಯಾವುದೇ ತಿಂಡಿ ಪೊಟ್ಟಣಗಳಗಲಿ, ನೀರಿನ ಬಾಟಲಿಗಳಾಗಲಿ ತೆಗೆದುಕೊಂಡು ಹೋಗುವಂತಿಲ್ಲ. ವಯಸ್ಸಾದವುರು ಹಾಗೂ ಮಕ್ಕಳ ಅನುಕೂಲಕ್ಕಾಗಿ 20 ರೂಪಾಯಿಗಳ ಟೋಕನ್ ತೆಗೆದುಕೊಂಡು ನೀರಿನ ಬಾಟಲಿಗಳನ್ನು ತೆಗೆದುಕೊಂಡು ಹೋಗಬಹುದು. ಜಲಪಾತ ವೀಕ್ಷಿಸಿ ಹಿಂತಿರುಗುವಾಗ ಬಾಟಲಿಯನ್ನು ತೋರಿಸಿ ಹಣವನ್ನು ಹಿಂಪಡೆಯಬಹುದು.
   ಜಲಪಾತದ ಬಳಿಗೆ ತಲುಪುತ್ತಲೆ 170 ಅಡಿ ಎತ್ತರದಿಂದ ದುಮ್ಮುಕ್ಕುತ್ತಿದ್ದ ನೀರಿನ ಜುಳು- ಜುಳು ನಾದವು ಕೇಳಿಸುತ್ತಿತ್ತು. ದಾರಿಯುದ್ದಕ್ಕು ಪಕ್ಷಿಗಳ ಕಲರವ ಇಂಪಾಗಿತ್ತು. ಜಲಪಾತ ತಲುಪುವ ಮೊದಲೇ ಹಲವಾರು ಫೋಟೋ ಶೂಟ್ ಗಳು ಸೆಲ್ಫಿಗಳು ಜೋರಾಗೆ ಇತ್ತು.
   ಜಲಪಾತ ತಲುಪಿದಾಗ ಒಂದು ಕ್ಷಣಕ್ಕೆ ಎಲ್ಲರು ಜಲಪಾತದ  ಸೌಂದರ್ಯವನ್ನು ನೋಡಿ ಸ್ತಬ್ಧವಾಗಿದ್ದೆವು. ರುದ್ರರಮಣೀಯವಾದ ಜಲಪಾತವನ್ನು ನೋಡಲು ಎರಡು ಕಣ್ಣುಗಳು ಸಾಲದು. ಅಲ್ಲಿಗೆ ಬಂದಿದ್ದ ಪ್ರವಾಸಿಗರು ಮೇಲಿನಿಂದ ಬೀಳುತ್ತಿದ್ದ ನೀರಿಗೆ ತಲೆಯನ್ನು ಇಟ್ಟು ಆನಂದಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಬಂದಿದ್ದ ಹೆಚ್ಚಿನ ಪ್ರವಾಸಿಗರು ಅಲ್ಲಿ ಮಿಂದೆಳುತ್ತಿದ್ದರು. ಜಲಪಾತದಿಂದ ದುಮ್ಮುಕ್ಕುತ್ತಿದ್ದ ನೀರಿನ ಬಳಿ ಹೋಗಲು ಕಬ್ಬಿಣದ ಸೇತುವೆ ಮಾದರಿಯನ್ನು ಕಲ್ಲಿನ ಮೇಲೆ ಹಾಸಿದ್ದು ಬಹಳ ಉಪಯೋಗಕರವಾಗಿದೆ, ಇಲ್ಲಿ ನಿಂತು ಹಲವು ಫೋಟೋ ಕ್ಲಿಕ್ಕಿಸಿದೆವು. ಜಲಪಾತದ ಮೇಲೆ ಶಿವಲಿಂಗ ಇದೆ ಎಂದು ನಮ್ಮ ಜೊತೆಯಲ್ಲಿದ್ದವರು ಹೇಳುತಿದ್ದರು ಆದರೆ ನಮಗೆ ನೀರಿನ ಹಾಲಿನಂತ ನೊರೆಯಲ್ಲಿ ಕಾಣ ಸಿಗುವುದಿಲ್ಲ. ಇರ್ಪು ಜಲಪಾತಕ್ಕೆ ಮಳೆಗಾಲದಲ್ಲಿ ಭೇಟಿ ನೀಡುವುದು ಸೂಕ್ತ.
   ಶ್ರೀರಾಮಲಕ್ಷ್ಮಣರು ಸೀತೆಯನ್ನು ಹುಡುಕುತ್ತ, ಬ್ರಹ್ಮಗಿರಿ ಬೆಟ್ಟಕ್ಕೆ ಬಂದಿದ್ದ ಸಂದರ್ಭಲ್ಲಿ ಶ್ರೀರಾಮನು ಲಕ್ಷ್ಮಣನನ್ನು ಕುಡಿಯಲು ನೀರು ತರಲು ಕೇಳಿಕೊಂಡನು, ಆಗ ಲಕ್ಷ್ಮಣನು ಬ್ರಹ್ಮಗಿರಿ ಮೇಲೆ ಬಾಣವನ್ನು ಬಿಟ್ಟನು, ಆ ಸ್ಥಳದಲ್ಲಿ ಲಕ್ಷ್ಮಣ ತೀರ್ಥ ಎಂದು ಕರೆಯಲ್ಪಡುವ ನದಿ ಹುಟ್ಟಿಕೊಂಡಿತು ಎಂಬುವುದು ಇಲ್ಲಿನ ಪ್ರತೀತಿ. ಆದ್ದರಿಂದ ಇರ್ಪು ಜಲಪಾತದಲ್ಲಿ ಸ್ನಾನ ಮಾಡಿದರೆ ನಮ್ಮ ಪಾಪಗಳು ನಾಶವಾಗುತ್ತದೆ ಎಂಬ ನಂಬಿಕೆ ಕೊಡಗಿನ ಜನರಲ್ಲಿದೆ. ಶಿವರಾತ್ರಿ ಸಂದರ್ಭಲ್ಲಿ ಸಹಸ್ರಾರು ಭಕ್ತರು ಪವಿತ್ರ ನದಿಯಲ್ಲಿ ಸ್ನಾನ ಮಾಡುತ್ತಾರೆ. ಇರ್ಪು ಜಲಪಾತವು ಕೇವಲ ಪ್ರವಾಸಿ ತಾಣವಲ್ಲದೆ ಧಾರ್ಮಿಕ ಕ್ಷೇತ್ರವು ಹೌದು.
   ಇರ್ಪು ಜಲಪಾತವನ್ನು ಪದಗಳಲ್ಲಿ ವರ್ಣಿಸಲು ಅಸಾಧ್ಯ. ನೀವೆಲ್ಲಾದರು ರಜೆಯ ಮಜವನ್ನು ಸವಿಯ ಬೇಕೆಂದಿದ್ದರೆ ಕೊಡಗಿನ ಇರ್ಪು ಜಜಲಪಾತಕ್ಕೆ ಭೇಟಿ ನೀಡಲೇ ಬೇಕು. ಇರ್ಪು ರಾಮೇಶ್ವರ ದೇವಸ್ಥಾನ ಹಾಗೂ ಜಲಪಾತವು ಕೊಡಗಿನ ಸಾಮಾಜಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಹಿರಿಮೆಯಾಗಿದ್ದು ದಯವಿಟ್ಟು ಇಲ್ಲಿಗೆ ಬರುವ ಪ್ರವಾಸಿಗರು ಮೋಜು ಮಸ್ತಿಗೆ ಬಾರದೆ, ಇಲ್ಲಿನ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಬೇಂಬುವುದು ನನ್ನ ವಿನಂತಿ.

ಮಡಿಕೇರಿ ಸರ್ಕಾರಿ ಆಸ್ಪತ್ರೆ ಪುರಾಣ



     ನನ್ನ ಸ್ನೇಹಿತನಿಗೆ ಕಾಲೇಜು ಸೇರುವ ನಿಮಿತ್ತ Physical fitness certificateನ್ನು ಕೊಡಬೇಕಿತ್ತು, ಆದ್ದರಿಂದ ಅವನೊಂದಿಗೆ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ತೆರಳಿದೆವು. 5ರೂ ಚೀಟಿಯನ್ನು ಕೌಂಟರಿನಿಂದ ಪಡೆದು ಎಲ್ಲಿ ಹೋಗಬೇಕು ಎಂದು ವಿಚಾರಿಸಿದಾಗ 63ನಂ ಕೊಠಡಿಗೆ ಹೋಗಿ ಅಲ್ಲಿ ಸರ್ಜನ್  ಇರುತ್ತಾರೆ ಎಂದರು.
ನಾವು ಅಲ್ಲಿಗೆ ಹೋದಾಗ  ಯಾರು ಇರಲಿಲ್ಲ ನಂತರ ದಾದಿಯರನ್ನು ಕೇಳಿದಾಗ ನೀವು 14ನಂ ಕೊಠಡಿಗೆ ಹೋಗಿ ಡಾ|| ಇರುತ್ತಾರೆ ಎಂದಾಗ ಅಲ್ಲಿಗೆ ತೆರಳಿದೆವು. ಅಲ್ಲಿ ಡಾ|| ನೀವು Height, weight, chestನ್ನು ದಾದಿಯರಲ್ಲಿ measure ಮಾಡಿಸಿ,vision testನ್ನು ಮಾಡಿಸಿ ಎಂದು ಸೌಜನ್ಯವಿಲ್ಲದೆ ಮಾತನಾಡಿಸಿ ಕಳಿಸಿದರು. ನಾವು ಎಲ್ಲಾ Measurement ಮತ್ತು test ಮುಗಿಸಿ ಹೋದಾಗ  ಡಾ|| ಅಲ್ಲಿ ಇರಲಿಲ್ಲ, ಸ್ವಲ್ಪ ಹೊತ್ತು ಕಾದು ಕುಳಿತೆವು. ಆಗ ಬಂದ ಡಾ||  ನಾನು certificate ಬರೆಯುವಂತಿಲ್ಲ, Senior ಡಾ|| ಬರೆಯಬೇಕು, ಇಂದು ಆಸ್ಪತ್ರೆಗೆ ಮಂತ್ರಿಗಳು ಭೇಟಿ ನೀಡಿರುವ ಕಾರಣ ಎಲ್ಲಾ ಡಾ|| ಗಳು ಅಲ್ಲಿಗೆ ಹೋಗಿದ್ದಾರೆ ನೀವು ನಾಳೆ ಬೆಳಿಗ್ಗೆ ಬನ್ನಿ ಎಂದು ಕಳಿಸಿದರು.
ಅಲ್ಲಿಯೆ ಇದ್ದ ದಾದಿಯು 28ನಂ ಕೊಠಡಿಗೆ ಹೋಗಲು ಸೂಚಿಸಿದರು. ಅಲ್ಲಿಗೆ ಹೋದಾಗ ಡಾ|| ಈಗಷ್ಟೇ ಹೋದರು, ಹೊರಗೆಲ್ಲಾದರು ಸಿಕ್ಕಿದರೆ ಕೇಳಿ ನೋಡಿ ಎಂದರು.
ಅಲ್ಲಿಯೇ ಇದ್ದ HOD ಎಂಬ ಕೊಠಡಿಯಲ್ಲಿ ಡಾ|| ಇದ್ದಾರೆ ಎಂದು ಖಚಿತ ಪಡಿಸಿಕೊಂಡ ನಾವು ಅವರು ಹೊರಗೆ ಬರುವವರೆಗೆ ಕಾದೆವು. ಅಲ್ಲಿಂದ ಹೊರ ಬಂದ ಡಾ||  Physical fitness certificate ಬರೆದು ಕೊಡಿ ಎಂದಾಗ, ನೀವು 14ನಂ ಕೊಠಡಿಗೆ ಹೋಗಿ, ನಾನು ಅಲ್ಲಿಗೆ ಹೋಗುವೆನು ಎಂದರು. ನಾವು ಅಲ್ಲಿ ಸುಮಾರು 1ಗಂಟೆಗಳ ಕಾಲ ಕಾದರು ಡಾ|| ಬರಲಿಲ್ಲ.
ಕೇವಲ ಒಂದು Physical fitness certificate  ಗಾಗಿ ಅಲ್ಲಿ ಇಲ್ಲಿ ಅಲೆದಾಡಿಸುವ ಆಸ್ಪತ್ರೆ ಸಿಬ್ಬಂದಿಗಳು ಬಡವರು,ಸಾಮಾನ್ಯ ವರ್ಗದವರು, ರೋಗ ಪೀಡಿತರನ್ನು ಹೇಗೆಲ್ಲ ಅಲೆದಾಡಿಸಬಹುದು.
ಯಾವ ಮಂತ್ರಿಗಳು ಯಾವ ಕಾರಣಕ್ಕೆ ಆಸ್ಪತ್ರೆಗೆ ಬಂದಿದ್ದರು ಎಂದು ನನಗೆ ತಿಳಿದಿಲ್ಲ ಆದರೆ ಎಲ್ಲಾ ವೈದ್ಯರು ಮಂತ್ರಿಗಳ ಹಿಂದೆ ಹೋದರೆ ರೋಗಿಗಳು ಗತಿಯೇನು..??
ಮಂತ್ರಿಗಳು ಆಸ್ಪತ್ರೆಗೆ ಹೋದರೆ ವೈದ್ಯರು ಕರ್ತವ್ಯ ನಿರ್ವಹಿಸುದಿಲ್ಲ ಎಂದಾಯಿತ!!!
ಕೊಡಗಿನಲ್ಲಿ ದೊಡ್ಡ ಆಸ್ಪತ್ರೆ ಎಂದು ಇರುವುದು ಮಡಿಕೇರಿಯ ಜಿಲ್ಲಾ ಆಸ್ಪತ್ರೆ. ಇಲ್ಲಿಯೇ ಹೀಗೆ ಇರುವಾಗ ತಾಲ್ಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರಗಳ ಗತಿ ಏನು..??
ಯಾವುದೇ ಕಾಯಿಲೆ ಬಂದರು ಸರ್ಕಾರಿ ಆಸ್ಪತ್ರೆಗೆ ಹೋಗಬಾರದು ಎಂದು ಯೋಚಿಸಿದಾಗ, Physical fitnessನಂತಹ certificateಗಳಿಗೆ ಹೋಗಲೇ ಬೇಕಾದ ಅನಿವಾರ್ಯತೆ...!!! ಕಡೇಗು ನಮಗೆ Physical fitness certificate ಸಿಕ್ಕಿಲ್ಲ, ನಾಳೆ ಹೋಗಿ try ಮಾಡಿ ನೋಡೋಣ ಅಲ್ಲವೇ....!!!!