ರಾಮ ಅವನ ತಂದೆ ತಾಯಿಗೆ ಒಬ್ಬನೆ ಮಗ, ಅವನ ತಂದೆ ಕಾಫಿ ಎಸ್ಟೇಟಿನ ಮಾಲೀಕರು. 10ನೇ ತರಗತಿ ಆದ ನಂತರ ಪದವಿಪೂರ್ವ ಶಿಕ್ಷಣಕ್ಕೆ ತಮ್ಮ ಊರಿನಿಂದ ಸುಮಾರು 30ಕಿ.ಮೀ ದೂರದಲ್ಲಿರುವ ಪಟ್ಟಣಕ್ಕೆ ರಾಮನನ್ನು ಕಳುಹಿಸಿದರು. ರಾಮ ಪ್ರಥಮ ಪಿಯುಸಿಯಲ್ಲಿ ಅನುತ್ತೀರ್ಣನಾದ. ಇದಾದ ನಂತರ ತಂದೆ ತಾಯಿಯನ್ನು ಒಪ್ಪಿಸಿ ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿಗೆ ಪುನಃ ಪ್ರಥಮ ಪಿಯುಸಿಗೆ ಪ್ರವೇಶ ಪಡೆದ. ಅಲ್ಲಿ ಓಡಾಡಲು ಬೈಕ್ ಬೇಕೆಂದು ಸುಮಾರು 1.8ಲಕ್ಷ ಮೌಲ್ಯದ ಬೈಕನ್ನು ತೆಗೆಸಿಕೊಂಡ. ಕಾಲೇಜಿಗೆ ಸೇರಿದ ಕೆಲವು ತಿಂಗಳುಗಳ ನಂತರ ಬೈಕ್ ಓಡಿಸುತ್ತಿದ್ದಾಗ ನಿಯಂತ್ರಣ ಕಳೆದುಕೊಂಡು ರಸ್ತೆ ವಿಭಾಜಕಕ್ಕೆ ಡಿಕ್ಕಿ ಹೊಡೆದು ಸ್ಥಳದಲ್ಲೇ ತೀರಿಕೊಂಡ.
ಇದು ಕೇವಲ ರಾಮನ ವಿಷಯವಲ್ಲ, ಈಗಿನ ಯುವಜನತೆ ಅದರಲ್ಲೂ ವಿದ್ಯಾರ್ಥಿಗಳು ತಂದೆ ತಾಯಿಯರನ್ನು ಪೀಡಿಸಿ ಬೈಕ್ ತೆಗೆಸಿಕೊಂಡು ತಮ್ಮ ಪ್ರಾಣಕ್ಕೆ ಕುತ್ತು ತಂದುಕೊಳ್ಳುತಿದ್ದಾರೆ. ವೇಗದಲ್ಲಿ ಬೈಕ್ ಚಲಾಯಿಸಿದರೆ ಏನೋ ಸಾಹಸ ಮಾಡಿದ್ದೇನೆ ಎಂಬ ಅಹಂಕಾರ. ತನ್ನ ವಿರುದ್ಧ ದಿಕ್ಕಿನಿಂದ ವಾಹನ ಬರುತ್ತಿದ್ದರೂ ವೇಗವನ್ನು ಕಡಿಮೆ ಮಾಡಲಾರೆ ಎಂಬ ಗರ್ವ. ದಿನಂಪ್ರತಿ ಸುದ್ದಿವಾಹಿನಿ ಮತ್ತು ದಿನ ಪತ್ರಿಕೆಗಳಲ್ಲಿ ದ್ವಿಚಕ್ರ ವಾಹನಗಳ ಅಪಘಾತಗಳ ಸುದ್ದಿ ಸಾಮಾನ್ಯವಾಗಿದೆ. "ಅವಸರವೆ ಅಪಘಾತಕ್ಕೆ ಕಾರಣ", ಎಂಬ ಘೋಷ ವಾಕ್ಯ ಎಲ್ಲಾ ಹೆದ್ದಾರಿಗಳಲ್ಲಿ ಬರೆದಿದ್ದರು ಅಪಘಾತಗಳು ಕಡಿಮೆಯಾಗುತ್ತಿಲ್ಲ. "ಅಪಘಾತ ವಲಯ" ಎಂಬ ಎಚ್ಚರಿಕೆ ಫಲಕಗಳು ಕೂಡ ಕೆಲಸ ಮಾಡುತ್ತಿಲ್ಲ.
ವೇಗವನ್ನು ನಿಯಂತ್ರಿಸಲು ಹೆದ್ದಾರಿಗಳಲ್ಲಿ ರಸ್ತೆ ಉಬ್ಬುಗಳನ್ನು ನಿರ್ಮಿಸಿದ್ದಾರೆ. ಈಗ ಬೈಕಿನ ಹಿಂಬದಿ ಸವಾರ ಕೂಡ ಹೆಲ್ಮೆಟ್ ಧರಿಸಬೇಕೆಂಬ ಕಾನೂನು ಜಾರಿಗೊಳಿಸಿದ್ದಾರೆ. ಇಷ್ಟೆಲ್ಲ ಸುರಕ್ಷಿತ ಕ್ರಮಗಳು ಜಾರಿಯಲ್ಲಿದ್ದರು ಅಪಘಾತಗಳು ನಿಲ್ಲುತ್ತಿಲ್ಲ.
ಅಪಘಾತಗಳಲ್ಲಿ ಸಾವು ನೋವುಗಳು ಸಂಭವಿಸಲು ಪ್ರಮುಖ ಕಾರಣಗಳೇನೆಂದು ನೋಡುವುದಾದರೆ:-
1)ಅತಿ ಹೆಚ್ಚು ವೇಗದಲ್ಲಿ ಚಲಾಯಿಸುವುದು.2)ಭಾರವಾದ ಟ್ರಕ್ ಗಳು.
3)ಕುಡಿದು, ಪಾನಮತ್ತರಾಗಿ ವಾಹನ ಚಲಾಯಿಸುವುದು.
4)ಹೆಲ್ಮೆಟ್ ಮತ್ತು ಸೀಟ್ ಬೆಲ್ಟ್ ಧರಿಸದೆ ವಾಹನ ಚಲಾಯಿಸುವುದು.
5)ವಾಹನ ಚಲಾಯಿಸುವಾಗ ಮೊಬೈಲ್ ನಲ್ಲಿ ಮಾತನಾಡುವುದು.
ಅಘಾತಕಾರಿ ವಿಷಯವೇನೆಂದರೆ ಭಾರತದ ಪ್ರಮುಖ ಹತ್ತು ನಗರಗಳಲ್ಲಿ ಬೆಂಗಳೂರು ವಾಹನ ಅಪಘಾತಗಳ ಸಂಖ್ಯೆಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.
2014ರ ಸಮೀಕ್ಷೆಯ ಪ್ರಕಾರ ಬೆಂಗಳೂರಿನಲ್ಲಿ ಸಂಭವಿಸಿದ ಅಪಘಾತಗಳಲ್ಲಿ ಸರಿ ಸುಮಾರು10,444 ಮಂದಿ ಸಾವನ್ನಪ್ಪಿದ್ದಾರೆ. ಕರ್ನಾಟಕ ರಾಜ್ಯದಲ್ಲಿ 43,694 ಅಪಘಾತಳು ವರದಿಯಾಗಿವೆ.ಭಾರತ ದೇಶದಲ್ಲಿ ಪ್ರತಿ ಗಂಟೆಗೆ 16 ಅಪಘಾತಗಳು ಸಂಭವಿಸುತ್ತಿದೆ. 53 ಬೃಹತ್ ನಗರಗಳಲ್ಲಿ ದೇಶದ ರಾಜಧಾನಿ ದೆಹಲಿ ಮೊದಲನೇ ಸ್ಥಾನದಲ್ಲಿದೆ.
ಭಾರತದಲ್ಲಿ ಆರ್ಥಿಕ ಮತ್ತು ಜನಸಂಖ್ಯೆಗಳಿಗಿಂತ ವಾಹನಗಳ ಸಂಖ್ಯೆ ಏರುತ್ತಿದೆ. ಪ್ರತಿ ಮನೆಯಲ್ಲಿ ಕನಿಷ್ಠ 2 ರಿಂದ 4 ವಾಹನಗಳು ಇದ್ದೇ ಇದೆ.
ವಿಶ್ವ ಆರೋಗ್ಯ ಸಂಸ್ಥೆಯ (WHO) ಪ್ರಕಾರ ಭಾರತದಲ್ಲಿ ಸಾವನ್ನಪ್ಪಲು ಅಥವಾ ಅಂಗವಿಕಲತೆಗೆ ರಸ್ತೆ ಅಪಘಾತಗಳು ಕಾರಣವಾಗುತ್ತಿದೆ. ಮುಖ್ಯವಾಗಿ ಯುವಕರು ಮತ್ತು ಮಧ್ಯ ವಯಸ್ಕರು ಅಪಘಾತಗಳಿಂದಾಗಿ ಪ್ರಾಣ ಕಳೆದುಕೊಳ್ಳುತಿದ್ದಾರೆ.
ಇದನ್ನೆಲ್ಲ ನೋಡಿದಾಗ ತುಂಬಾ ಬೇಸರವಾಗುತ್ತದೆ, ಇನ್ನಾದರೂ ಅಪಘಾತಗಳು ಕಡಿಮೆಯಾಗುತ್ತದೆ ಎಂಬುವುದು ಕನಸಿನ ಮಾತು!!!
Source: Road accidents in India 2014


ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ