ಕಳೆದ ಭಾನುವಾರ ನನ್ನ ಅಕ್ಕ ಮನೆಗೆ ಬಂದಿರುವಾಗ ಎಲ್ಲಿಗಾದರು ಪ್ರವಾಸ ಹೋಗೋಣ ಎಂದಾಗ ನನಗೆ ತಕ್ಷಣ ಎಲ್ಲಿಗೆ ಹೋಗೋಣ ಎಂದು ತಿಳಿಯಲಿಲ್ಲ, ಇರ್ಪು ರಾಮೇಶ್ವರ ದೇವಸ್ಥಾನಕ್ಕೆ ಹೋಗಿದ್ದ ನಾನು ಇದುವರೆಗೂ ಇರ್ಪು ಜಲಪಾತವನ್ನು ಕಂಡಿರಲಿಲ್ಲ.
ನಾನು ನನ್ನ ಸ್ನೇಹಿತ ದೀಕ್ಷಿತ್ ನಿಗೆ ನಾಳೆ ಇರ್ಪು ಜಲಪಾತಕ್ಕೆ ಹೋಗೋಣವೆ ಎಂದು ವಾಟ್ಸೇಪ್ ಮಾಡಿದೆ, ಅವನು ಹೋಗೋಣ ಹಾಗೆಯೇ ಟಿ-ಶೆಟ್ಟಿಗೇರಿ ಬಳಿ ಇರುವ ಟಿ-ಎಸ್ಟೇಟಿಗು ಹೋಗಿ ಬರೋಣ ಎಂದ. ಹೀಗೆ ಒಂದೇ ದಿನದಲ್ಲಿ ತಕ್ಷಣದಲ್ಲಿ, ಯಾವುದೇ ತಯಾರಿಯಿಲ್ಲದೆ ಒಂದು ಸ್ಥಳಕ್ಕೆ ಹೋಗೋಣ ಎಂದು ನಿರ್ಧರಿಸಿದ್ದು.
ನಾನು ನನ್ನ ಅಕ್ಕ ಒಂದು ಬೈಕಿನಲ್ಲಿ ದೀಕ್ಷಿತ್ ಮತ್ತು ಅವನ ಅಕ್ಕ ಇನ್ನೊಂದು ಬೈಕಿನಲ್ಲಿ ದೀಕ್ಷಿತ್ ನ ಇನ್ನು 6 ಮಂದಿ ಗೆಳೆಯರು ಇನ್ನೆರಡು ಬೈಕಿನಲ್ಲಿ ಹೀಗೆ ಒಟ್ಟು 10 ಮಂದಿ ಇರ್ಪು ಜಲಪಾತವನ್ನು ನೋಡಲು ಗೋಣಿಕೊಪ್ಪದಿಂದ ಪ್ರಯಾಣ ಬೆಳೆಸಿದೆವು.
ಗೋಣಿಕೊಪ್ಪ-ಕುಟ್ಟ ಹೆದ್ದಾರಿಯಲ್ಲಿ, ಶ್ರೀಮಂಗಲ ಮಾರ್ಗವಾಗಿ ಇರ್ಪುವಿಗೆ ತಲುಪಿದೆವು. ಇರ್ಪು ಜಲಪಾತವನ್ನು ವೀಕ್ಷಿಸಲು 50 ರೂಪಾಯಿ ಪ್ರವೇಶದರದ ಜೊತೆಗೆ ವಾಹನ ನಿಲುಗಡೆಗೆ ಪ್ರತಿ ದ್ವಿಚಕ್ರಗಳಿಗೆ 5 ರೂಪಾಯಿಯಂತೆ ತೆತ್ತು ಜಲಪಾತ ವೀಕ್ಷಣೆ ದ್ವಾರವನ್ನು ಪ್ರವೇಶಿಸಿದೆವು. ನನ್ನ ಪ್ರಕಾರ ಕೊಡಗಿನ ಯಾವುದೇ ಪ್ರವಾಸಿ ತಾಣಗಳಲ್ಲಿ ಇಷ್ಟು ದುಬಾರಿ ಪ್ರವೇಶ ಶುಲ್ಕ ಇರಲಾರದು. 50 ರೂಪಾಯಿ ತೆತ್ತು ಜಲಪಾತದ ಪ್ರಕೃತಿ ಸೌಂದರ್ಯವನ್ನು ನೋಡುವಂತಹ ಪರಿಸ್ಥಿತಿ ನಮ್ಮದು. ನಾನು ಪ್ರವೇಶ ದರ ಇರಲೇಬಾರದು ಎಂದು ಹೇಳುತ್ತಿಲ್ಲ, ಕನಿಷ್ಠ ಪಕ್ಷ ಅದು ಸಾಮಾನ್ಯ ಮನುಷ್ಯನಿಂದ ಕೊಡುವಷ್ಟು ಇದ್ದರೆ ಸಾಕಿತ್ತು. ನಿರ್ವಹಣೆ, ಸ್ವಚ್ಚತೆ ಎಂಬಿತ್ಯಾದಿ ಖರ್ಚುಗಳಿಗೆ ಸರಿ ಹೊಂದಿಸಿ ಬರುವ ಪ್ರವಾಸಿಗರಿಗೆ ಕೊಡಬಹುದು ಎಂದನಿಸುವ ಮೊತ್ತ ಆಗಿದ್ದರೆ ಚೆನ್ನಾಗಿತ್ತು.
ಜಲಪಾತಕ್ಕೆ ಹೋಗುವವರು ಯಾವುದೇ ತಿಂಡಿ ಪೊಟ್ಟಣಗಳಗಲಿ, ನೀರಿನ ಬಾಟಲಿಗಳಾಗಲಿ ತೆಗೆದುಕೊಂಡು ಹೋಗುವಂತಿಲ್ಲ. ವಯಸ್ಸಾದವುರು ಹಾಗೂ ಮಕ್ಕಳ ಅನುಕೂಲಕ್ಕಾಗಿ 20 ರೂಪಾಯಿಗಳ ಟೋಕನ್ ತೆಗೆದುಕೊಂಡು ನೀರಿನ ಬಾಟಲಿಗಳನ್ನು ತೆಗೆದುಕೊಂಡು ಹೋಗಬಹುದು. ಜಲಪಾತ ವೀಕ್ಷಿಸಿ ಹಿಂತಿರುಗುವಾಗ ಬಾಟಲಿಯನ್ನು ತೋರಿಸಿ ಹಣವನ್ನು ಹಿಂಪಡೆಯಬಹುದು.
ಜಲಪಾತದ ಬಳಿಗೆ ತಲುಪುತ್ತಲೆ 170 ಅಡಿ ಎತ್ತರದಿಂದ ದುಮ್ಮುಕ್ಕುತ್ತಿದ್ದ ನೀರಿನ ಜುಳು- ಜುಳು ನಾದವು ಕೇಳಿಸುತ್ತಿತ್ತು. ದಾರಿಯುದ್ದಕ್ಕು ಪಕ್ಷಿಗಳ ಕಲರವ ಇಂಪಾಗಿತ್ತು. ಜಲಪಾತ ತಲುಪುವ ಮೊದಲೇ ಹಲವಾರು ಫೋಟೋ ಶೂಟ್ ಗಳು ಸೆಲ್ಫಿಗಳು ಜೋರಾಗೆ ಇತ್ತು.
ಜಲಪಾತ ತಲುಪಿದಾಗ ಒಂದು ಕ್ಷಣಕ್ಕೆ ಎಲ್ಲರು ಜಲಪಾತದ ಸೌಂದರ್ಯವನ್ನು ನೋಡಿ ಸ್ತಬ್ಧವಾಗಿದ್ದೆವು. ರುದ್ರರಮಣೀಯವಾದ ಜಲಪಾತವನ್ನು ನೋಡಲು ಎರಡು ಕಣ್ಣುಗಳು ಸಾಲದು. ಅಲ್ಲಿಗೆ ಬಂದಿದ್ದ ಪ್ರವಾಸಿಗರು ಮೇಲಿನಿಂದ ಬೀಳುತ್ತಿದ್ದ ನೀರಿಗೆ ತಲೆಯನ್ನು ಇಟ್ಟು ಆನಂದಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಬಂದಿದ್ದ ಹೆಚ್ಚಿನ ಪ್ರವಾಸಿಗರು ಅಲ್ಲಿ ಮಿಂದೆಳುತ್ತಿದ್ದರು. ಜಲಪಾತದಿಂದ ದುಮ್ಮುಕ್ಕುತ್ತಿದ್ದ ನೀರಿನ ಬಳಿ ಹೋಗಲು ಕಬ್ಬಿಣದ ಸೇತುವೆ ಮಾದರಿಯನ್ನು ಕಲ್ಲಿನ ಮೇಲೆ ಹಾಸಿದ್ದು ಬಹಳ ಉಪಯೋಗಕರವಾಗಿದೆ, ಇಲ್ಲಿ ನಿಂತು ಹಲವು ಫೋಟೋ ಕ್ಲಿಕ್ಕಿಸಿದೆವು. ಜಲಪಾತದ ಮೇಲೆ ಶಿವಲಿಂಗ ಇದೆ ಎಂದು ನಮ್ಮ ಜೊತೆಯಲ್ಲಿದ್ದವರು ಹೇಳುತಿದ್ದರು ಆದರೆ ನಮಗೆ ನೀರಿನ ಹಾಲಿನಂತ ನೊರೆಯಲ್ಲಿ ಕಾಣ ಸಿಗುವುದಿಲ್ಲ. ಇರ್ಪು ಜಲಪಾತಕ್ಕೆ ಮಳೆಗಾಲದಲ್ಲಿ ಭೇಟಿ ನೀಡುವುದು ಸೂಕ್ತ.
ಶ್ರೀರಾಮಲಕ್ಷ್ಮಣರು ಸೀತೆಯನ್ನು ಹುಡುಕುತ್ತ, ಬ್ರಹ್ಮಗಿರಿ ಬೆಟ್ಟಕ್ಕೆ ಬಂದಿದ್ದ ಸಂದರ್ಭಲ್ಲಿ ಶ್ರೀರಾಮನು ಲಕ್ಷ್ಮಣನನ್ನು ಕುಡಿಯಲು ನೀರು ತರಲು ಕೇಳಿಕೊಂಡನು, ಆಗ ಲಕ್ಷ್ಮಣನು ಬ್ರಹ್ಮಗಿರಿ ಮೇಲೆ ಬಾಣವನ್ನು ಬಿಟ್ಟನು, ಆ ಸ್ಥಳದಲ್ಲಿ ಲಕ್ಷ್ಮಣ ತೀರ್ಥ ಎಂದು ಕರೆಯಲ್ಪಡುವ ನದಿ ಹುಟ್ಟಿಕೊಂಡಿತು ಎಂಬುವುದು ಇಲ್ಲಿನ ಪ್ರತೀತಿ. ಆದ್ದರಿಂದ ಇರ್ಪು ಜಲಪಾತದಲ್ಲಿ ಸ್ನಾನ ಮಾಡಿದರೆ ನಮ್ಮ ಪಾಪಗಳು ನಾಶವಾಗುತ್ತದೆ ಎಂಬ ನಂಬಿಕೆ ಕೊಡಗಿನ ಜನರಲ್ಲಿದೆ. ಶಿವರಾತ್ರಿ ಸಂದರ್ಭಲ್ಲಿ ಸಹಸ್ರಾರು ಭಕ್ತರು ಪವಿತ್ರ ನದಿಯಲ್ಲಿ ಸ್ನಾನ ಮಾಡುತ್ತಾರೆ. ಇರ್ಪು ಜಲಪಾತವು ಕೇವಲ ಪ್ರವಾಸಿ ತಾಣವಲ್ಲದೆ ಧಾರ್ಮಿಕ ಕ್ಷೇತ್ರವು ಹೌದು.
ಇರ್ಪು ಜಲಪಾತವನ್ನು ಪದಗಳಲ್ಲಿ ವರ್ಣಿಸಲು ಅಸಾಧ್ಯ. ನೀವೆಲ್ಲಾದರು ರಜೆಯ ಮಜವನ್ನು ಸವಿಯ ಬೇಕೆಂದಿದ್ದರೆ ಕೊಡಗಿನ ಇರ್ಪು ಜಜಲಪಾತಕ್ಕೆ ಭೇಟಿ ನೀಡಲೇ ಬೇಕು. ಇರ್ಪು ರಾಮೇಶ್ವರ ದೇವಸ್ಥಾನ ಹಾಗೂ ಜಲಪಾತವು ಕೊಡಗಿನ ಸಾಮಾಜಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಹಿರಿಮೆಯಾಗಿದ್ದು ದಯವಿಟ್ಟು ಇಲ್ಲಿಗೆ ಬರುವ ಪ್ರವಾಸಿಗರು ಮೋಜು ಮಸ್ತಿಗೆ ಬಾರದೆ, ಇಲ್ಲಿನ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಬೇಂಬುವುದು ನನ್ನ ವಿನಂತಿ.

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ